ಆಂಗ್ಲೋ - ಜಪಾನ್ ಒಪ್ಪಂದ
	ರಷ್ಯ ಹತ್ತೊಂಬತ್ತನೆಯ-ಶತಮಾನದ ಕೊನೆಯ ವರ್ಷಗಳಲ್ಲಿ ಮಂಚೂರಿಯ ಮತ್ತು ಕೊರಿಯ ದೇಶಗಳ ಆಕ್ರಮಣ ಸಿದ್ಧತೆ ನಡಸಿದ್ದರ ವಿರೋಧವಾಗಿ 1902ನೆಯ ಜನವರಿ 30ರಂದು ಜಪಾನ್, ಇಂಗ್ಲೆಂಡ್ ದೇಶಗಳ ನಡುವೆ ಆದುದು.  ರಷ್ಯ ಆ ದೇಶಗಳನ್ನು ಆಕ್ರಮಿಸಿದರೆ ಇಂಗ್ಲೆಂಡ್, ಜಪಾನ್‍ಗಳ ವ್ಯಾಪಾರಕ್ಕೆ ಧಕ್ಕೆಯುಂಟಾಗುತ್ತಿತ್ತು.  ದೂರ ಪೌರ್ವಾತ್ಯ ದೇಶಗಳ ವ್ಯಾಪಾರದಲ್ಲಿ `ತೆರೆದ ಬಾಗಿಲು ಅಥವಾ ಅನಿರ್ಬಂಧಿತ ವ್ಯಾಪಾರನೀತಿಯನ್ನು ಪಾಲಿಸುವುದಕ್ಕೆ ಆ ಎರಡೂ ರಾಷ್ಟ್ರಗಳು ಪರಸ್ಪರ ನೆರವಾಗಬೇಕೆಂದು ನಿರ್ಧರಿಸಲಾಯಿತು. ಒಪ್ಪಂದದ ಅವಧಿಯನ್ನು ಆಗಾಗ್ಗೆ ಮುಂದುವರಿಸಿ, ಮೊದಲನೆಯ ಮಹಾಯುದ್ಧದವರೆಗೂ ಅದು ಇಂಗ್ಲೆಂಡ್-ಜಪಾನ್ ಮೈತ್ರಿಯ ಮೂಲಾಧಾರವಾಗಿರುವಂತೆ ಮಾಡಿಕೊಂಡರು. ಈ ಒಪ್ಪಂದಕ್ಕನುಸಾರವಾಗಿಯೇ ಮಿತ್ರರಾಷ್ಟ್ರಗಳ ಪರವಾಗಿ ಜಪಾನ್ ಮೊದಲ ಮಹಾಯುದ್ಧದಲ್ಲಿ ಪಾತ್ರವಹಿಸಿದ್ದು. ಯುದ್ಧ ಮುಗಿದು ಲೀಗ್ ಆಫ್ ನೇಷನ್ಸ್ ಸ್ಥಾಪಿತವಾದ ಮೇಲೆ, ಈ ದ್ವಿಪಕ್ಷೀಯ ಕರಾರು ಅಸಂಗತವಾದ್ದರಿಂದಲೂ ಇಂಗ್ಲೆಂಡ್, ಫ್ರಾನ್ಸ್, ಜಪಾನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಚತುರ್ರಾಷ್ಟ್ರೀಯ ಪೆಸಿಫಿಕ್ ಒಪ್ಪಂದವನ್ನು ಮಾಡಿಕೊಂಡಿದ್ದರಿಂದಲೂ ಈ ಒಪ್ಪಂದವನ್ನು 1923ರ ಆಗಸ್ಟ್ 17ರಲ್ಲಿ ರದ್ದುಗೊಳಿಸಲಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ